ದೇಶದ ಜನತೆಯ ಒಳಿತಿಗಾಗಿ ಮೋದಿ ಸರ್ಕಾರವು 2016 ರಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಬಳಸಿಕೊಂಡು ಕೋಟ್ಯಾನು ಕೋಟಿ ಭಾರತೀಯರು ಇಂದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆದರೆ ಅದೆಷ್ಟೋ ಜನಗಳಿಗೆ ಮೋದಿ ಸರ್ಕಾರದ ಅನೇಕ ಯೋಜನೆಗಳ ಕುರಿತು ಸರಿಯಾಗಿ ಮಾಹಿತಿ ಸಿಗದೆ ಮೋದೀಜೀ ಅವರು ದೇಶದ ಪ್ರಗತಿಗೆ ಏನೂ ಕೆಲಸ ಮಾಡಿಲ್ಲವೆಂದು ಹೇಳುತ್ತಾರೆ. ಆದ್ದರಿಂದ ಈ ಲೇಖನದಲ್ಲಿ ಮೋದಿ ಸರ್ಕಾರದ ಯೋಜನೆಗಳು ಮತ್ತು ಆ ಯೋಜನೆಗಳ ಸದುಪಯೋಗ ಪಡೆದುಕೊಂಡ ಪಲಾನುಭವಿಗಳ ಕುರಿತು ಸಂಪೂರ್ಣ ಮಾಹಿತಿ ನೀಡುತ್ತೇವೆ.
2016 ರಲ್ಲಿ ಜಾರಿಗೆ ತಂದ ಯೋಜನೆಗಳು
1 – ಸ್ಟಾರ್ಟ್ ಅಪ್ ಇಂಡಿಯಾ
ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಉತ್ತೇಜಿಸುವ ಸಲುವಾಗಿ ಧನಸಹಾಯ, ಮಾರ್ಗದರ್ಶನ ಮತ್ತು ಉದ್ಯಮ ಪಾಲುದಾರಿಕೆಯ ಅವಕಾಶಗಳನ್ನು ಒದಗಿಸಲು ಕೇಂದ್ರ ಸರ್ಕಾರವು ‘ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯನ್ನು 2016ರ ಜನವರಿ 16ರಂದು ಆರಂಭಿಸಿತು.
ಲಕ್ಷಗಟ್ಟಲೆ ಸಂಬಳ ನೀಡುವ ಅದೆಷ್ಟೇ ಉನ್ನತ ಹುದ್ದೆಯಿದ್ದರೂ, ಮತ್ತೊಬ್ಬರ ಕೈ ಕೆಳಗೆ ಕೆಲಸ ಮಾಡಬೇಕೆಂದರೆ ಕೆಲವರಿಗೆ ಕಸಿವಿಸಿ. ತನ್ನದೇ ಸ್ವಂತ ಉದ್ಯಮವಿರಬೇಕು ನಾನೇ ಅದರ ಬಾಸ್ ಆಗಿರಬೇಕು ಹೇಳೋರು ಕೇಳೋರು ಯಾರೂ ಇರಬಾರದು ಎಂಬುದು ಬಹುತೇಕರ ಬಯಕೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ಭಾರತದ ಯುವಜನತೆ ಸ್ವಂತ ಉದ್ಯಮದತ್ತ ಒಲವು ತೋರುತ್ತಿದ್ದಾರೆ. ಪರಿಣಾಮ ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿವೆ. ಅದರಲ್ಲೂ ಬೆಂಗಳೂರು ಅತಿ ಹೆಚ್ಚು ನವೋದ್ಯಮಗಳಿಗೆ ನೆಚ್ಚಿನ ತಾಣವಾಗಿದ್ದು, ಭಾರತದ ಸ್ಟಾರ್ಟ್ ಅಪ್ ಹಬ್ ಎಂಬ ಖ್ಯಾತಿ ಗಳಿಸಿದೆ. ಭಾರತದಲ್ಲಿ ಸ್ಟಾರ್ಟ್‌ಅಪ್‌ಗಳ ಸಂಖ್ಯೆ ಗಣನೀಯ ಏರಿಕೆ ಕಾಣಲು ಮೋದಿ ಸರ್ಕಾರ 2016ರಲ್ಲಿ ಜಾರಿಗೆ ತಂದ ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆ ಕೂಡ ಕಾರಣ. ನವೋದ್ಯಮಿಗಳಿಗೆ ಬೆಂಬಲ, ಉದ್ಯಮ ಪ್ರಾರಂಭಿಸಲು ಸೂಕ್ತ ಮೂಲಸೌಕರ್ಯ ಕಲ್ಪಿಸುವ ಜೊತೆಗೆ ಭಾರತದಲ್ಲಿ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುವುದು ಈ ಯೋಜನೆಯ ಮೂಲ ಉದ್ದೇಶ. ಆವಿಷ್ಕಾರ ಹಾಗೂ ವಿನೂತನ ಯೋಚನೆಗಳ ಮೂಲಕ ಬೆಳವಣಿಗೆ ಹೊಂದಲು ಈ ಯೋಜನೆ ಮೂಲಕ ಸ್ಟಾರ್ಟ್ ಅಪ್‌ಗಳಿಗೆ ಸರ್ಕಾರ ನೆರವು ನೀಡುತ್ತಿದೆ.
ಏನೆಲ್ಲ ಪ್ರಯೋಜನ ಪಡೆಯಬಹುದು?
- ಸ್ಟಾರ್ಟ್‌ಅಪ್ ಇಂಡಿಯಾ ಯೋಜನೆಯಡಿಯಲ್ಲಿ ಸ್ಟಾರ್ಟ್‌ಅಪ್‌ಗಳು ಸರ್ಕಾರದಿಂದ ಅನೇಕ ನೆರವುಗಳನ್ನು ಪಡೆಯಬಹುದು. ಆದ್ರೆ ಈ ಎಲ್ಲ ಪ್ರಯೋಜನಗಳನ್ನು ಪಡೆಯಲು ಆ ಸಂಸ್ಥೆ ಅಥವಾ ಕಂಪನಿ ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರ ಸಂವರ್ಧನ ಇಲಾಖೆ (ಡಿಪಿಐ-ಐಟಿ)ಯಿಂದ ಸ್ಟಾರ್ಟ್‌ಅಪ್ ಎಂದು ಗುರುತಿಸಲ್ಪಟ್ಟಿರಬೇಕು.
- ಆರು ಕಾರ್ಮಿಕ ಹಾಗೂ ಮೂರು ಪರಿಸರ ಕಾನೂನುಗಳ ಅನುಸರಣೆ ಬಗ್ಗೆ ಸ್ಟಾರ್ಟ್‌ಅಪ್‌ಗಳೇ ಸ್ವದೃಢೀಕರಣ ಕೊಟ್ಟುಕೊಳ್ಳಬಹುದಾಗಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಯಾವುದೇ ಇಲಾಖೆಯನ್ನು ಸಂಪರ್ಕಿಸಬೇಕಾದ ಅಗತ್ಯವಿಲ್ಲ. ಆದ್ರೆ ಈ ಸ್ವದೃಢೀಕರಣವನ್ನು ಸ್ಟಾರ್ಟ್‌ಅಪ್ ಪ್ರಾರಂಭಗೊಂಡ 5ವರ್ಷಗಳ ತನಕ ಮಾತ್ರ ಮಾಡಿಕೊಳ್ಳಲು ಅವಕಾಶವಿದೆ. ಆ ಬಳಿಕ ನಿಗದಿತ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಸ್ಟಾರ್ಟ್‌ಅಪ್‌ಗಳ ಮೇಲಿನ ನಿಯಂತ್ರಣವನ್ನು ತಗ್ಗಿಸೋ ಉದ್ದೇಶದಿಂದ ಸರ್ಕಾರ ಈ ಅನುಕೂಲವನ್ನು ಕಲ್ಪಿಸಿದೆ. ಉದ್ಯಮಿಗಳಿಗೆ ವಿವಿಧ ಇಲಾಖೆಗಳಿಂದ ಅನುಮೋದನೆ ಪಡೆದುಕೊಳ್ಳೋ ಕೆಲಸ ತಗ್ಗಿಸಿ ಉದ್ಯಮದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ನೆರವಾಗೋ ಉದ್ದೇಶದಿಂದ ಈ ಸಡಿಲಿಕೆ ಮಾಡಲಾಗಿದೆ.
- ಇಂಟರ್ ಮಿನಿಸ್ಟ್ರಿಯಲ್ ಬೋರ್ಡ್ ಪ್ರಮಾಣಪತ್ರ ಹೊಂದಿರೋ ಸ್ಟಾರ್ಟ್‌ಅಪ್‌ಗಳು ಗಳಿಸೋ ಲಾಭಕ್ಕೆ ಸತತ ಮೂರು ವರ್ಷಗಳ ತನಕ ಆದಾಯ ತೆರಿಗೆ ವಿನಾಯ್ತಿ ನೀಡಲಾಗಿದೆ. ಉದ್ಯಮದ ಬೆಳವಣಿಗೆಯನ್ನು ಪ್ರೋತ್ಸಾಹಿಸೋ ನಿಟ್ಟಿನಲ್ಲಿ ಇಂಥ ವಿನಾಯ್ತಿ ನೀಡಲಾಗಿದೆ.
- ಇಂಟರ್ ಮಿನಿಸ್ಟ್ರಿಯಲ್ ಬೋರ್ಡ್ ಪ್ರಮಾಣಪತ್ರ ಹೊಂದಿರೋ ಸ್ಟಾರ್ಟ್‌ಅಪ್‌ಗಳು ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ ಶೇರ್‌ಗಳನ್ನು ಮಾರಾಟ ಮಾಡಿ ಗಳಿಸೋ 10ಕೋಟಿ ರೂ. ತನಕದ ಆದಾಯಕ್ಕೆ ಯಾವುದೇ ತೆರಿಗೆ ಇರೋದಿಲ್ಲ.
- ಸ್ಟಾರ್ಟ್‌ಅಪ್ ಪ್ರಾರಂಭಿಸಿ ತೀವ್ರ ನಷ್ಟವಾದ್ರೆ ಆ ಸಂಸ್ಥೆಯನ್ನು ಮುಚ್ಚೋದು ಇತರ ಕಂಪನಿಗಳಿಗಿಂತ ಸುಲಭ. ಇತರ ಕಂಪನಿಗಳನ್ನು ಮುಚ್ಚಲು ಕನಿಷ್ಠ 180 ದಿನಗಳು ಅಗತ್ಯ. ಆದ್ರೆ ಸ್ಟಾರ್ಟ್‌ಅಪ್‌ಗಳನ್ನು 90 ದಿನಗಳಲ್ಲೇ ಮುಚ್ಚಬಹುದು. ಅಲ್ಲದೆ, ಇಂಥ ಸ್ಟಾರ್ಟ್‌ಅಪ್ ಆಸ್ತಿಗಳನ್ನು ಮಾರಾಟ ಮಾಡಿ ಅದ್ರಿಂದ ಬಂದ ಹಣವನ್ನು ಸಾಲ ನೀಡಿದವರಿಗೆ ಪಾವತಿಸಲು ಒಬ್ಬ ಅಧಿಕಾರಿಯನ್ನು ಕೂಡ ನೇಮಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳು ಸ್ಟಾರ್ಟ್‌ಅಪ್ ನಿಲ್ಲಿಸೋ ಕುರಿತು ಅರ್ಜಿ ಸಲ್ಲಿಸಿದ ಆರು ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ.
- ಸ್ಟಾರ್ಟ್‌ಅಪ್ ಪೇಟೆಂಟ್ ಅರ್ಜಿಯ ಕ್ಷಿಪ್ರ ವಿಲೇವಾರಿ ಹಾಗೂ ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ.
- ವಿನೂತನ ಆವಿಷ್ಕಾರಗಳಲ್ಲಿ ತೊಡಗಿರೋ ಸ್ಟಾರ್ಟ್‌ಅಪ್‌ಗಳ ಅಭಿವೃದ್ಧಿ ಹಾಗೂ ಬೆಳವಣಿಗೆಗಾಗಿ ಕೇಂದ್ರ ಸರ್ಕಾರ 10ಸಾವಿರ ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಭಾರತೀಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಎಸ್‌ಐಡಿಬಿಐ) ಈ ಹಣವನ್ನು ನಿರ್ವಹಣೆ ಮಾಡುತ್ತಿದೆ.
ಇದುವರೆಗೂ ಈ ಯೋಜನೆಯ ಅಡಿಯಲ್ಲಿ 92,683 ಸ್ಟಾರ್ಟ್ ಅಪ್ ಗಳು ದೇಶದೆಲ್ಲೆಡೆ ಪ್ರಾರಭವಾಗಿವೆ. ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.
2 – ಸೇತು ಭಾರತಮ್ ಯೋಜನೆ
ಹೆಚ್ಚುತ್ತಿರುವ ರೈಲ್ವೇ ಕ್ರಾಸಿಂಗ್ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಮೋದಿ ಸರ್ಕಾರವು “ಸೇತು ಭಾರತಂ” ಯೋಜನೆಯನ್ನು 2016ರ ಮಾರ್ಚ್ 4ರಂದು ಕೈಗೆತ್ತಿಕೊಂಡಿತು. ರಾಷ್ಟ್ರೀಯ ಹೆದ್ದಾರಿಗಳನ್ನು ರೈಲ್ವೇ ಕ್ರಾಸಿಂಗ್‌ನಿಂದ ಮುಕ್ತಗೊಳಿಸುವುದು ಹಾಗೂ ಪುರಾತನ ಸೇತುವೆಗಳನ್ನು ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವುದು ಈ ಯೋಜನೆಯ ಉದ್ದೇಶವಾಗಿತ್ತು.
ಈ ನೂತನ ಯೋಜನೆಯಡಿ, ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿಯೇ ರೈಲು ಹಳಿ ಹಾದು ಹೋಗುವಂತಹ ಕಡೆಗಳಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿ ಅಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ. ಜೊತೆಗೆ ಇದೇ ಯೋಜನೆಯಡಿಯಲ್ಲಿ ಬ್ರಿಟಿಷರ ಕಾಲದ 1,500 ಮೇಲ್ಸೇತುವೆಗಳನ್ನು ದುರಸ್ತಿಗೊಳಿಸಲಾಗುತ್ತದೆ. ಒಟ್ಟಾರೆ ದೇಶಾದ್ಯಂತ 208 ರೈಲ್ವೇ ಕ್ರಾಸಿಂಗ್‌ಗಳಲ್ಲಿ ಮೇಲ್ಸೇತುವೆಗಳನ್ನು ನಿರ್ಮಿಸುವ ಮೂಲಕ 2019ರೊಳಗೆ ಹೆದ್ದಾರಿಗಳನ್ನು ರೈಲ್ವೇ ಕ್ರಾಸಿಂಗ್ ಮುಕ್ತಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿತ್ತು.
ಇದುವರೆಗೂ ಈ ಯೋಜನೆಯಡಿ ಪ್ರಯೋಜನ ಪಡೆದ ರಾಜ್ಯಗಳು ಮತ್ತು ಒಟ್ಟು ಸೇತುಗಳನ್ನುನಿರ್ಮಿಸಲಾಗಿದೆ ಎನ್ನುವ ವಿವರ ಕೆಳಗಿದೆ.
ಮಾರ್ಚ್ 2020 ರ ವೇಳೆಗೆ, ಈ ಯೋಜನೆಯ ಅನುಷ್ಠಾನದಿಂದಾಗಿ 50% ಕ್ಕಿಂತ ಹೆಚ್ಚು ರಸ್ತೆ ಅಪಘಾತಗಳು ಕಡಿಮೆಯಾಗಿದೆ ಎಂದು ವರದಿಗಳು ಸೂಚಿಸುತ್ತವೆ.
ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.
3 – ಸ್ಟಾಂಡ್ ಅಪ್ ಇಂಡಿಯಾ
ಪ್ರಧಾನಿ ನರೇಂದ್ರ ಮೋದಿಯವರು ಜಾರಿಗೆ ತಂದ ಹಲವು ಪ್ರಮುಖ ಯೋಜನೆಗಳಲ್ಲಿ ಸ್ಟ್ಯಾಂಡ್ ಅಪ್ ಇಂಡಿಯಾ ಕೂಡ ಒಂದು. ಮಹಿಳೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗಾಗಿ ಈ ಯೋಜನೆಯನ್ನು ಮೀಸಲಿರಿಸಲಾಗಿದೆ.
ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ಪ್ರಮುಖ ಉದ್ದೇಶವೇನೆಂದರೆ ಯಾವುದೇ ಬ್ಯಾಂಕಿನ ಸಾಲಗಳಲ್ಲಿ ರೂ. 10 ಲಕ್ಷದಿಂದ 1 ಕೋಟಿವರೆಗಿನ ಸಾಲಗಳಲ್ಲಿ ಒಂದು ಸಾಲವನ್ನು ಮಹಿಳಾ ಉದ್ಯೋಗದಾತರಿಗೆ ಇಲ್ಲವೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ನೀಡಲೇಬೇಕೆಂದು ನಿರ್ಧರಿಸಲಾಗಿದೆ. ಇದು ಉತ್ಪಾದನೆ, ಸೇವೆ, ವ್ಯಾಪಾರ ಈ ಮೂರೂ ಕ್ಷೇತ್ರಕ್ಕೆ ಅನ್ವಯಿಸಲಾಗಿರುತ್ತದೆ. ಒಂದು ವೇಳೆ ಇದು ಪಾಲುದಾರಿಕಾ ಸಂಸ್ಥೆಯಾಗಿದ್ದರೆ ಶೇ. 51 ರಷ್ಟು ಪಾಲುದಾರಿಕೆಯನ್ನು ಮಹಿಳೆ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿ ಹೊಂದಿರಬೇಕಾಗುತ್ತದೆ.
ಈ ಯೋಜನೆ ಪಡೆಯಲು ಏನು ಅರ್ಹತೆ ಇರಬೇಕು?
- ಮಹಿಳೆ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿಯಾಗಿರಬೇಕು ಹಾಗೂ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು
- ಈ ಸಾಲಕ್ಕೆ ಒಳಪಡುವವರು ಹಸಿರು ಕ್ಷೇತ್ರ ಯೋಜನೆಯೊಳಗಿರಬೇಕು. ಇಲ್ಲಿ ಹಸಿರು ಕ್ಷೇತ್ರವೆಂದರೆ ಉತ್ಪಾದನೆ, ಸೇವೆ, ಇಲ್ಲವೇ ವ್ಯಾಪಾರವನ್ನು ಹೊಸದಾಗಿ ಆರಂಭಿಸುವುದಾಗಿರಬೇಕು.
- ಒಂದು ವೇಳೆ ಇದು ಪಾಲುದಾರಿಕಾ ಸಂಸ್ಥೆಯಾಗಿದ್ದರೆ ಶೇ. 51 ರಷ್ಟು ಪಾಲುದಾರಿಕೆಯನ್ನು ಮಹಿಳೆ/ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿ ಹೊಂದಿರಬೇಕು.
- ಸಾಲಗಾರ ಯಾವುದೇ ಬ್ಯಾಂಕಿನ ಸದಸ್ಯ ಆಗಿರಬಾರದು.
ಸಾಲದ ಸ್ವರೂಪ
₹10 ಲಕ್ಷದಿಂದ ₹1 ಕೋಟಿವರೆಗೆ ಇದು ಕಾಂಪೋಸಿಟ್ ಸಾಲವಾಗಿರುತ್ತದೆ. ಅಂದರೆ, ಕರಾರು ಸಾಲ ಮತ್ತು ಕಾರ್ಯವಾಹಿ ಬಂಡವಾಳ ಎರಡೂ ಅನ್ವಯವಾಗುತ್ತದೆ. ಸಾಲದ ಉದ್ದೇಶ ಮಹಿಳೆ/ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ವ್ಯಕ್ತಿಗಳಿಂದ ಹೊಸ ಸಂಸ್ಥೆಗಳನ್ನು ಹುಟ್ಟು ಹಾಕುವುದು ಮತ್ತು ಅವರಿಗೆ ಉದ್ಯೋಗಾವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಸಾಲದ ಗಾತ್ರ
ತಾವು ಆರಂಭಿಸುತ್ತಿರುವ ಉದ್ದಿಮೆಯ ಒಟ್ಟು ವೆಚ್ಚದ ಶೇ. 75ರಷ್ಟನ್ನು ಸಾಲದ ರೂಪದಲ್ಲಿ ಪಡೆಯಬಹುದು. ಆದರೆ, ಈ ಷರತ್ತು ಎಲ್ಲರಿಗೂ ಅನ್ವಯವಾಗುವುದಿಲ್ಲ. ಒಂದು ವೇಳೆ ಯೋಜನೆ ಆರಂಭಿಸುವ ವ್ಯಕ್ತಿ ಶೇ. 25ಕ್ಕಿಂತ ಹೆಚ್ಚು ಬಂಡವಾಳ ಹೂಡಲು ಯೋಗ್ಯನಾಗಿದ್ದು, ಮತ್ತು ಆತ ಬಯಸುತ್ತಿದ್ದಲ್ಲಿ ಇಲ್ಲವೇ ಇತರೆಡೆಯಿಂದ ಆತ ಸಹಾಯ ಪಡೆದಿದ್ದಲ್ಲಿ ಶೇ. 75 ರಷ್ಚು ಸಾಲ ನೀಡಬೇಕೆಂದೇನೂ ಇಲ್ಲ.
ಬಡ್ಡಿದರ
ಬ್ಯಾಂಕಿನ ಅತ್ಯಂತ ಕಡಿಮೆ ಬಡ್ಡಿದರವನ್ನು ಇದು ಒಳಗೊಂಡಿರುತ್ತದೆ. (base rate (MCLR) + 3%+ tenor premium).
ಭದ್ರತೆ
ಪ್ರಾಥಮಿಕ ಭದ್ರತೆ ಹೊರತು ಪಡಿಸಿ ಇತರೆ ಬ್ಯಾಂಕ್ ನ ಸಹಕಾರದ ಭದ್ರತೆ ಇಲ್ಲವೇ ಭದ್ರತಾ ಖಾತರಿ ನಿಧಿ ಯೋಜನೆಯ (Credit Guarantee Fund Scheme for Stand-Up India Loans) ಸಹಕಾರದಿಂದಲೂ ಭದ್ರತೆ ಪಡೆಯಬಹುದಾಗಿದೆ.
ಮರುಪಾವತಿ
ಸಾಲ ಪಡೆದ ದಿನದಿಂದ ಕಡಿಮೆ ಎಂದರೆ 18 ತಿಂಗಳಿನಿಂದ 7 ನೇ ವರ್ಷದ ಅಂತ್ಯದೊಳಗೆ ಬಡ್ಡಿ ಸಹಿತ ಸಂಪೂರ್ಣ ಸಾಲ ಮರುಪಾವತಿಯಾಗಬೇಕು.
ಇದುವರೆಗೂ ಈ ಯೋಜನೆಯ ಅಡಿಯಲ್ಲಿ ದೇಶದೆಲ್ಲೆಡೆ ಎಷ್ಟು ಫಲಾನುಭವಿಗಳಿಗೆ ಉಪಯೋಗವಾಗಿದೆ ಎನ್ನುವ ಮಾಹಿತಿಯನ್ನು ನೀವು ಕೆಳಗಡೆ ಕಾಣಬಹುದಾಗಿದೆ.
ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ನೋಡಬಹುದು..
4 – ಉಜ್ವಲ ಯೋಜನೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) 2016 ರಲ್ಲಿ ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಐದು ಕೋಟಿ ಮಹಿಳಾ ಸದಸ್ಯರಿಗೆ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಸಿಲಿಂಡರ್ (ಅಡುಗೆ ಅನಿಲ) ಸಂಪರ್ಕ ಒದಗಿಸುವ ಗುರಿ ಹೊಂದಿದೆ. ಈ ಯೋಜನೆಯನ್ನು 2018 ರ ಏಪ್ರಿಲ್‌ನಲ್ಲಿ ವಿಸ್ತರಿಸಲಾಗಿದ್ದು , ಇನ್ನೂ ಏಳು ವರ್ಗಗಳ (SC/ST, PMAY, AAY, ಹಿಂದುಳಿದ ವರ್ಗಗಳು, ಚಹಾ ತೋಟ, ಅರಣ್ಯ ನಿವಾಸಿಗಳು, ದ್ವೀಪಗಳು) ಮಹಿಳಾ ಫಲಾನುಭವಿಗಳನ್ನು ಒಳಗೊಂಡಿದೆ. ಎರಡನೇ ಹಂತದಲ್ಲಿ 8 ಕೋಟಿ ಮಹಿಳಾ ಸದಸ್ಯರಿಗೆ LPG ಸಂಪರ್ಕ ನೀಡುವ ಗುರಿ ಹೊಂದಲಾಗಿದೆ.
ಉಜ್ವಲ ಯೋಜನೆಗೆ ಅರ್ಹತೆ ಏನು?
- ಅರ್ಜಿದಾರರು ಮಹಿಳೆಯೇ ಆಗಿರಬೇಕು.
- ಮಹಿಳೆಯ ವಯಸ್ಸು 18ಕ್ಕಿಂತ ಹೆಚ್ಚಿರಬೇಕು.
- ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ) ಕುಟುಂಬದವರಾಗಿರಬೇಕು.
- ಬಿಪಿಎಲ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಹೊಂದಿರಬೇಕು.
- ಅರ್ಜಿದಾರರ ಕುಟುಂಬದ ಯಾವೊಬ್ಬ ಸದಸ್ಯರ ಹೆಸರಿನಲ್ಲಿಯೂ ಎಲ್‌ಪಿಜಿ ಕನೆಕ್ಷನ್ ಇರಬಾರದು.
ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ನೋಡಬಹುದು..
5 – ನಮಾಮಿ ಗಂಗೆ ಯೋಜನೆ
ಗಂಗಾ ನದಿ ಕೇವಲ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರಣಗಳಿಗಷ್ಟೇ ಪ್ರಾಮುಖ್ಯತೆ ಪಡೆದಿಲ್ಲ, ದೇಶದ ಶೇ.40ರಷ್ಟು ಜನಸಂಖ್ಯೆ ಈ ನದಿಯನ್ನು ಅವಲಂಬಿಸಿಯೇ ಜೀವನ ನಡೆಸುತ್ತಿದ್ದಾರೆ. ಇಂತಹ ಜೀವನದಿ ಮಾಲಿನ್ಯ ಹೊಂದಿದ್ದು, ಗಂಗಾ ನದಿಯ ಮಾಲಿನ್ಯವನ್ನು ಪರಿಹರಿಸಲು ಕೇಂದ್ರ ಸರ್ಕಾರ ‘ನಮಾಮಿ ಗಂಗಾ ಯೋಜನೆ’ ಕೈಗೊಂಡಿತು.
ಗಂಗಾ ನದಿಯ ಮಾಲಿನ್ಯವನ್ನು ಕೊನೆಗೊಳಿಸಲು ಮತ್ತು ನದಿಯನ್ನು ಪುನರುಜ್ಜೀವನಗೊಳಿಸಲು ‘ನಮಾಮಿ ಗಂಗೆ’ ಎಂಬ ಹೆಸರಿನ ಸಮಗ್ರ ಗಂಗಾ ಪುನರುಜ್ಜೀವನ ಮಿಷನ್ ಅನ್ನು ಕೇಂದ್ರ ಸರ್ಕಾರವು ಜುಲೈ 7, 2016 ರಂದು ಪ್ರಾರಂಭಿಸಿತು.
ಮೂರು ಹಂತಗಳಲ್ಲಿ ಅನುಷ್ಠಾನ :
ಯೋಜನೆಯ ಅನುಷ್ಠಾನವನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗಿದೆ
ಆರಂಭಿಕ ಹಂತದ ಚಟುವಟಿಕೆಗಳು ಎಂದರೆ, ನದಿ ಪಾತ್ರವನ್ನು ಸ್ವಚ್ಛಗೊಳಿಸುವುದು, ತೇಲುವ ಘನತ್ಯಾಜ್ಯಗಳ ನಿರ್ವಹಣೆ, ಗ್ರಾಮೀಣ ನೈರ್ಮಲೀಕರಣದ ಮೂಲಕ ನದಿಗೆ ಕಲುಷಿತ ತ್ಯಾಜ್ಯ ಮತ್ತು ನೀರು ಸೇರುವುದನ್ನು ತಡೆಗಟ್ಟುವುದು, ಶೌಚಾಲಯಗಳ ನಿರ್ಮಾಣ, ಶವಾಗಾರಗಳ ಆಧುನೀಕರಣ, ಹೊಸ ನಿರ್ಮಾಣಗಳ ಮೂಲಕ ಅರೆಸುಟ್ಟ ಶವಗಳು ನದಿ ಸೇರದಂತೆ ತಡೆಯುವುದು, ಮಾನವ-ನದಿಯ ಸಂಬಂಧ ಹೆಚ್ಚಿಸಲು ಘಾಟ್ ಗಳ ಮರು ನಿರ್ಮಾಣ ಮತ್ತು ಆಧುನೀಕರಣ ಯೋಜನೆಗಳನ್ನು ಒಳಗೊಂಡಿದೆ.
ಮಧ್ಯಮಾವಧಿ ಚಟುವಟಿಕೆಗಳು, ನಗರ ಮತ್ತು ಕೈಗಾರಿಕಾ ತ್ಯಾಜ್ಯಗಳು ನದಿಗೆ ಸೇರದಂತೆ ತಡೆಯಲು ರಚಿತವಾಗಿವೆ. ಮುಂದಿನ 5 ವರ್ಷಗಳಲ್ಲಿ 2500 ಎಂಎಲ್ ಡಿ ಸಾಮರ್ಥ್ಯದ ತ್ಯಾಜ್ಯ ವಿಲೇವಾರಿ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಯೋಜನೆಯು ದೀರ್ಘಾವಧಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಪ್ರಮುಖ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಸರ್ಕಾರಿ- ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಂಬಂಧ ಸಂಪುಟವು ಚಿಂತನೆ ನಡೆಸುತ್ತಿದೆ. ಇದಕ್ಕೆ ಒಪ್ಪಿಗೆ ದೊರೆತಲ್ಲಿ, ಎಲ್ಲಾ ನಗರಗಳಲ್ಲಿ, ಮಾರುಕಟ್ಟೆಗಳಲ್ಲಿ ಶುದ್ಧೀಕರಣ ಪ್ರಕ್ರಿಯೆಗಳನ್ನು ನಿಗಾವಹಿಸಲು ವಿಶೇಷ ಉದ್ದೇಶ ಪಡೆಯನ್ನು ರಚಿಸಲಾಗುವುದು.
ಕೈಗಾರಿಕಾ ಮಾಲಿನ್ಯವನ್ನು ತಡೆಗಟ್ಟಲು, ಕೆಲವೊಂದು ಸುಧಾರಿತ ಅನುಷ್ಠಾನ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ. ನದಿಪಾತ್ರದಲ್ಲಿರುವ ಭಾರೀ ಪ್ರಮಾಣದಲ್ಲಿ ಮಾಲಿನ್ಯ ಉಂಟು ಮಾಡುತ್ತಿರುವ ಕಾರ್ಖಾನೆಗಳಿಗೆ ನಿಯಂತ್ರಕ ಕ್ರಮಗಳನ್ನು ಅಳವಡಿಸಿಕೊಳ್ಳಲು ಹಾಗು ಶೂನ್ಯ-ದ್ರವ ತ್ಯಾಜ್ಯ ಸಾಧಿಸಲು ಸೂಚಿಸಲಾಗಿದೆ. ಈ ಎಲ್ಲಾ ನಿರ್ಣಯಗಳನ್ನು ಜಾರಿಗೆ ತರುವ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿಯು ಕಾರ್ಯಯೋಜನೆಯನ್ನು ರೂಪಿಸಲಾಗಿದೆ. ಎಲ್ಲಾ ಕೈಗಾರಿಕೆಗಳಿಗೆ ರಿಯಲ್ ಟೈಮ್ ಆನ್ ಲೈನ್ ಮೇಲ್ವಿಚಾರಣೆ ಘಟಕಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ.
ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ನೋಡಬಹುದು.
6 – ಫಸಲ್ ಭೀಮ ಯೋಜನೆ
2016ರ ಜನವರಿ 13 ರಂದು ಈ ಯೋಜನೆಯನ್ನು ಘೋಷಿಸಲಾಯಿತು. ಕೇಂದ್ರ ಕೃಷಿ ಮತ್ತು ಕಲ್ಯಾಣ ಸಚಿವಾಲಯವು ಈ ಯೋಜನೆಯ ನಿರ್ವಹಣೆ ಮಾಡುತ್ತಿದ್ದು, ಕರ್ನಾಟಕ ಸೇರಿದಂತೆ ಭಾರತದ ಎಲ್ಲ ರಾಜ್ಯಗಳಲ್ಲೂ ಈ ಯೋಜನೆ ಜಾರಿಯಲ್ಲಿದೆ. ರೈತರಿಗೆ ಕಡಿಮೆ ಬೆಲೆಗೆ ಬೆಳೆ ವಿಮೆ ಒದಗಿಸುವುದೇ ಈ ಯೋಜನೆಯ ಪ್ರಮುಖ ಉದ್ದೇಶ. ಈ ಯೋಜನೆ ಜಾರಿಗೆ ಬರುವುದಕ್ಕೂ ಮುನ್ನ ಬೆಳೆ ವಿಮೆಯ ಪ್ರೀಮಿಯಂ ಹೆಚ್ಚಿನ ಮಟ್ಟದಲ್ಲಿತ್ತು. ವಾಸ್ತವದಲ್ಲಿ ದೇಶದ ರೈತರು ಬೆಳೆವಿಮೆ ಪ್ರಯೋಜನ ಪಡೆಯುವಲ್ಲಿ ವಿಫಲರಾಗಿದ್ದರು. ಈ ಸಮಸ್ಯೆಯನ್ನು ಪರಿಹರಿಸಲು ಈ ಯೋಜನೆ ಪ್ರಾರಂಭಿಸಲಾಗಿದೆ. ಈ ಯೋಜನೆಯಡಿ ಬೆಳೆ ವಿಮೆಯ ಪ್ರೀಮಿಯಂ ಕೇವಲ ಶೇ. 1.5 ರಿಂದ ಶೇ.2ರಷ್ಟು ಇರುತ್ತದೆ. ತೋಟಗಾರಿಕಾ ಮತ್ತು ವಾಣಿಜ್ಯ ಬೆಳೆಗಳಿಗೆ ಪ್ರೀಮಿಯಂ ಒಟ್ಟು ವಿಮಾ ಮೌಲ್ಯದ ಶೇ. 5 ರಷ್ಟಿರುತ್ತದೆ.
ಈ ಯೋಜನೆಯಡಿ ರೈತರು ಬೆಳೆ ವಿಮೆ ಖರೀದಿಸಿ ನಿಗದಿತ ಪ್ರೀಮಿಯಂ ಕಟ್ಟಬೇಕು. ಪ್ರೀಮಿಯಂ ಬೆಳೆ ಆಧರಿಸಿ ನಿಗದಿಯಾಗುತ್ತದೆ ಮತ್ತು ಇದನ್ನು ಬೀಜ ಬಿತ್ತನೆ ಕಾರ್ಯ ಪ್ರಾರಂಭ ಮೊದಲೇ ಮುನ್ನವೇ ಮಾಡಬೇಕು. ವಿಮೆ ಖರೀದಿಯ ನಂತರ ತಮ್ಮ ಹೊಲ ಗದ್ದೆಗಳಲ್ಲಿ ರೈತರು ಎಂದಿನಂತೆ ತಮ್ಮ ಕೆಲಸ ಮುಂದುವರಿಸಬಹುದು. ಯಾವುದೇ ನೈಸರ್ಗಿಕ ವಿಕೋಪಗಳಿಂದಾಗಲೀ ಅಥವಾ ತಮ್ಮ ಕೈಮೀರಿದ ಯಾವುದೇ ಘಟನೆಗಳಿಂದಾಗಲೀ ಬೆಳೆ ಹಾನಿ ಸಂಭವಿಸಿದರೆ ರೈತನು ವಿಮೆಯ ವಿಮೆ ಮಾಡಿದ ಮೊತ್ತವನ್ನು (ಸಮ್ ಅಶ್ಯೂರ್ಡ್) ಇನ್ಶೂರೆನ್ಸ್ ಕಂಪನಿಯಿಂದ ಪಡೆಯುತ್ತಾನೆ. ಭಾರತದ ಬಹಳಷ್ಟು ರೈತರು ತಮ್ಮ ಅವಶ್ಯಕತೆಗಳಾದ ಬಿತ್ತನೆ ಬೀಜ, ಗೊಬ್ಬರ ಅಥವಾ ಇತರ ಕೃಷಿ ಉಪಕರಣಗಳನ್ನು ಖರೀದಿಸಲು ಸಾಲದ ಮೊರೆ ಹೋಗಿರುತ್ತಾರೆ. ಒಂದೊಮ್ಮೆ ಬೆಳೆ ನಾಶವಾದರೆ ಆತ ತನ್ನ ಸಾಲವನ್ನು ತೀರಿಸಲಾಗದೇ, ಒತ್ತಡದಿಂದಾಗಿ, ಆತ್ಮಹತ್ಯೆ ಮಾಡಿಕೊಳ್ಳುವತ್ತ ಹೆಜ್ಜೆ ಇಡುತ್ತಾನೆ. ಈ ಯೋಜನೆಯಡಿ ರೈತನು ಬೆಳೆ ಹಾನಿಯಾದರೆ, ನಿಗದಿತ ವಿಮೆಮಾಡಿದ ಮೊತ್ತ ಪಡೆಯುತ್ತಾನೆ ಮತ್ತು ಇದನ್ನು ಆತ ತನ್ನ ಸಾಲವನ್ನು ತೀರಿಸಲು ಉಪಯೋಗಿಸಬಹುದಲ್ಲದೇ, ಇದು ಆತನ ಸಂಸಾರದ ಉಳಿವಿಗೂ ಕಾರಣವಾಗುತ್ತದೆ. ಈ ರೀತಿಯಲ್ಲಿ ರೈತನಿಗೆ ಬೆಳೆ ಹಾನಿಯಿಂದಾಗುವ ನಷ್ಟದ ಪ್ರಮಾಣ ಇಳಿಮುಖವಾಗುತ್ತದೆ ಮತ್ತು ಆತ ಉತ್ತಮ ಜೀವನ ನಡೆಸಲು ಸಹಕಾರಿಯಾಗುತ್ತದೆ.
ಈ ಯೋಜನೆಗೆ ಬೇಕಾಗಿರುವ ಅರ್ಹತಾ ಮಾನದಂಡಗಳು?
- ಫಸಲ್ ಬಿಮಾ ಯೋಜನೆಗೆ ಸಂಬಂಧಿಸಿದ ನಿಯಮಗಳು ಮತ್ತು ಅರ್ಹತೆಗಳು ಈ ಕೆಳಗಿನಂತಿವೆ
- ರೈತನು ಭಾರತೀಯ ಪ್ರಜೆ ಮತ್ತು ಭಾರತೀಯ ನಿವಾಸಿಯಾಗಿರಬೇಕು. – *ರೈತನು ರಬಿ, ಮುಂಗಾರು ಬೆಳೆ ಅಥವ ಇನ್ನಿತರ ವಾಣಿಜ್ಯ ಬೆಳೆ ಅಥವಾ ತೋಟಗಾರಿಕಾ ಬೆಳೆ ಹೊಂದಿರಬೇಕು.
- ರೈತನು ಆಯಾ ಪ್ರಾಂತ್ಯದ ಕೃಷಿ ಸಚಿವಾಲಯ ಸೂಚಿಸಿರುವ ಬೆಳೆಗಳನ್ನೇ ಬೆಳೆಸಬೇಕು. ಆಯಾ ಪ್ರದೇಶದ ಭೂಮಿ ಹಾಗೂ ಹವಾಮಾನವನ್ನು ಆಧರಿಸಿ ಬೆಳೆಗಳನ್ನು ಸೂಚಿಸಿರಲಾಗುತ್ತದೆ. ಇದರಿಂದ ಬೆಳೆ ಹಾನಿ ಸಂಭವ ಕಡಿಮೆಯಿರುತ್ತದೆ.
- ಫಸಲ್ ಬೀಮಾ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರಿಗೆ ಮಾತ್ರ ಯಾವುದೇ ರೀತಿಯ ಧನ ಸಹಾಯ ನೀಡಲಾಗುವುದು.
- ನೈಸರ್ಗಿಕ ವಿಪತ್ತು ಅಥವಾ ಕೀಟಬಾಧೆಯಿಂದಾದ ಹಾನಿಗೊಳಗಾದ ಬೆಳೆ ನಷ್ಟಕ್ಕೆ ರೈತನು ವಿಮಾ ಹಕ್ಕು ಪಡೆಯಬಹುದು.
- ಇನ್ನಿತರ ಪ್ರಾಕೃತಿಕ ವಿಕೋಪಗಳಾದ ನೈಸರ್ಗಿಕ ಬೆಂಕಿ, ಬರ ಪರಿಸ್ಥಿತಿ, ಬಿರುಗಾಳಿ, ನೀರಿನಿಂದುಂಟಾಗುವ ಹಾನಿ, ಪ್ರವಾಹ, ಕೀಟಬಾಧೆ ಇವುಗಳಿಂದ ಸಂಭವಿಸುವ ಹಾನಿಗಳಿಗೆ ಪರಿಹಾರ ಪಡೆಯಬಹುದು.
- ಕೇಂದ್ರ ಸರ್ಕಾರದ ಕೃಷಿಸಾಲದ ಖಾತೆ ಹೊಂದಿರುವಂತಹ ರೈತರು, ಯಾವುದೇ ಪರಿಶೀಲನೆಯಿಲ್ಲದೆ ಈ ಯೋಜನೆಯಲ್ಲಿ ವಿಮೆ ಪಡೆಯಲು ಅರ್ಹರಾಗಿರುತ್ತಾರೆ.
ಈ ಫಸಲ್ ಭೀಮಾ ಯೋಜನೆಯಡಿ ಕೆಳಕಾಣಿಸಿದ ಲಾಭಗಳನ್ನು ಪಡೆಯಬಹುದು:
- ಈ ಯೋಜನೆಯು ಬೇರೆ ವಿಮಾ ಕಂಪನಿಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಪ್ರೀಮಿಯಂ ದರದಲ್ಲಿ ವಿಮಾ ಸೌಲಭ್ಯ ಒದಗಿಸುತ್ತದೆ.
- ಬೆಳೆ ಕೊಯ್ಲು ಮಾಡಿದ ನಂತರ ಬೆಳೆಗಳಿಗೆ ಏನಾದರೂ ಹಾನಿಯುಂಟಾದರೆ ಅದಕ್ಕೆ ಪರಿಹಾರ ಒದಗಿಸುತ್ತದೆ.
- ಯೋಜನೆಯು ಕೃಷಿ ವಲಯದಲ್ಲಿ ಹಣದ ಹರಿವನ್ನು ಒದಗಿಸುವ ಭರವಸೆ ನೀಡುತ್ತದೆ.
- ಈ ಯೋಜನೆಯು ಲಾಭದ ವರ್ಗಾವಣೆಯನ್ನು ಸಾರ್ವಜನಿಕರಿಗೆ ನೇರವಾಗಿ ತಲುಪಿಸುವ ಭರವಸೆ ನೀಡಿರುವುದರಿಂದ ದಾಖಲೆ ಪತ್ರಗಳ ವ್ಯವಹಾರ ಮತ್ತು ಭ್ರಷ್ಟಾಚಾರದ ಮಟ್ಟ ತುಂಬಾ ಕಡೆಮೆಯಿರುತ್ತದೆ.
- ಸಹಾಯ ಧನ ಅಥವಾ ವಿಮೆಯ ಮೊತ್ತವನ್ನು ಪಾವತಿಸುವ ಸಂದರ್ಭದಲ್ಲಿ ಆಗಬಹುದಾದ ಯಾವುದೇ ರೀತಿಯ ಸೋರಿಕೆಯನ್ನು ತಡೆಗಟ್ಟಿ ಸಾರ್ವಜನಿಕರಿಗೆ ನೇರವಾಗಿ ಯೋಜನೆಯ ಲಾಭ ತಲುಪಿಸಲು ಇದು ಸರ್ಕಾರವನ್ನು ಶಕ್ತಗೊಳಿಸುತ್ತದೆ.
ಇದುವರೆಗೂ ಈ ಯೋಜನೆಯ ಅಡಿಯಲ್ಲಿ ಎಷ್ಟು ರೈತರಿಗೆ ಉಪಯುಕ್ತವಾಗಿದೆ ಎಂದು ಕೆಳಗಿನ ಮಾಹಿತಿಯಿಂದ ತಿಳಿಯಬಹುದಾಗಿದೆ.
ಇದರ ಕುರಿತ ಹೆಚ್ಚಿನ ಮಾಹಿತಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಕಾಣಬಹುದಾಗಿದೆ.